ಬೇಸ್ತು!

16 0 0
                                    

ಅಯ್ಯೋ! ನನ್ನ Hall ticket! ಬೆಳಿಗ್ಗೆ ತಾನೇ ಎರೆಡೆರಡು ಬಾರಿ ನೋಡಿಕೊಂಡು ಬಂದೆನಲ್ಲ? ಬ್ಯಾಗಿನಲ್ಲೆಯೇ ಇತ್ತಲ್ಲ? ಎಲ್ಲಿ ಹೊಯ್ತಪ್ಪ ದೇವ್ರೇ?

ಸದ್ದಿಲ್ಲದೇ ಒಂದೆರಡು ಬೆವರು ಹನಿ ಹಣೆಯಿಂದ ಉದುರಿದವು.

"ಅಯ್ಯಾ, ಅದೇನ್ ಮಾಡ್ತಾ ಇದೀಯಾ? ಇನ್ನೇನು bell ಆಗತ್ತೆ, ಹೋಗಿ ಕುಳಿತುಕೋ" bell ಮಾಡುವ ಹುಡುಗ ಅವಸರಿಸಿದ.

"ಅಲ್ಲಾ, ಅದೂ, ಹಾಲ್ ಟಿಕೆಟ್ ಹುಡುಕ್ತಾ ಇದೀನಿ. ಕಾಣುತ್ತಾ ಇಲ್ಲ" ಎಂದು ಬ್ಬೆ ಬ್ಬೆ ಬ್ಬೇ ಮಾಡಿದೆ.

ಏನಪ್ಪಾ ಈ ಹುಡುಗಿ ಗೋಳು ಎನ್ನುವಂತೆ ಮುಖ ಮಾಡಿ ಹೋದ ಆ ಹುಡುಗ.

ಇನ್ನು ಹುಡುಕಿ ಪ್ರಯೋಜನ ಇಲ್ಲ ಎಂದು ಗೊತ್ತಾದ ಮೇಲೆ ಏನಾದರಾಗಲಿ ಎಂದುಕೊಂಡು ಹಾಗೇ ಹೊರಟೆ. ಅಲ್ಲಿಯೇ ಒಬ್ಬ ಮಹಿಳಾ ಅಧ್ಯಾಪಕಿ ಇದ್ದರು. ಅವರಿಗೆ ನನ್ನ ಗೋಳು ತಿಳಿಸಿದೆ.

"ಏನಮ್ಮಾ? ಮನೆಯಲ್ಲಿ ಬ್ಯಾಗು ತೆಗೆದು ನೋಡಿದೆಯ ಇಲ್ಲವಾ? ಎದ್ದು ಹಾಗೇ ಬಂದುಬಿಟ್ಟೆ ಎನ್ನು?" ಎಂದುಬಿಡೋದೇ ಆಕೆ!

ನನ್ನ ಕಣ್ಣಲ್ಲಿ ಗಂಗೆ ಯಮುನೆ ಧುಮುಕಲು ಸಿದ್ಧರಾದರು. ಗುಮ್ಮನೆ ಹಾಗೇ ನಿಂತೆ.

"ಹೋಗಿ ಪರೀಕ್ಷಾ ಅಧೀಕ್ಷಕರನ್ನು (exam super intendant) ಭೇಟಿ ಮಾಡಿ. ಏನನ್ನುತ್ತಾರೋ ನೋಡೋಣ" ಎಂದರು ಆಕೆ ಕೊನೆಗೆ.

ಸರಿ. ಉಧೋ ಎಂದು ಅಧೀಕ್ಷಕರನ್ನು ಭೇಟಿಯಾಗಲು ಹೊರಟೆ.

"ಫೈನ್ ಕಟ್ಟಬೇಕಾಗುತ್ತದೆ. ಕಟ್ಟಿ ಡುಪ್ಲಿಕೇಟ್ Hall ticket ತೆಗೆದುಕೊಳ್ಳಿ" ಎಂದರು ಆತ.

ಇದೆಂಥಾ ಸಿನಿಮೀಯ ಸನ್ನಿವೇಶ ಎಂದೆನಿಸಿ ಅಂಥಾ ಸಮಯದಲ್ಲೂ ನಗು ಬರದೇ ಇರಲಿಲ್ಲ.

ಪರೀಕ್ಷೆ ಶುರುವಾಗಲು ಇನ್ನೇನು  ಕೆಲವೇ ಕ್ಷಣಗಳು ಉಳಿದಿದ್ದವು. ಅಷ್ಟರಲ್ಲಿ ಯಾರೋ ಪುಣ್ಯಾತ್ಮ ನನ್ನ ರೋಲ್ ಸಂಖ್ಯೆ ತಿಳಿದುಕೊಂಡು: "ನಾನು ತಂದು ಕೊಡ್ತೀನಿ, ನೀವು ಬರಿಯುತ್ತ ಇರಿ. ದಂಡ ಆಮೇಲೆ ಕಟ್ಟಿದರೆ ಆಯಿತು" ಎಂದರು.

ಆತನಿಗೆ ಮನಸ್ಸಿನಲ್ಲೇ ವಂದಿಸುತ್ತಾ ಬಂದು ನನ್ನ ಜಾಗದಲ್ಲಿ ಕುಳಿತೆ.

ಹಾಗೂ ಹೀಗೂ ಪರೀಕ್ಷೆ ಮುಗಿಸಿ ಆಫೀಸ್ಗೆ ಹೋಗಿ ದಂಡ ಕಟ್ಟಿ ನನ್ನ ಪುಸ್ತಕ ತೆಗೆದೆ, 'ಫಟ್ ' ಎಂದು ಹಾಲ್ ಟಿಕೆಟ್ ಉದುರಿತು. ಅವಸರದಲ್ಲಿ ಬೇರೆ ಹಾಳೆಗಳ ನಡುವೆ ಸೇರಿಕೊಂಡಿದ್ದ ಈ ಹಾಳೆ ಕಣ್ಣಿಗೆ ಕಂಡಿರಲಿಲ್ಲ.

"ಅಯ್ಯೋ, ಹೊಟ್ಟೆ ಬೇರೆ ಹಸಿಯುತ್ತಾ ಇದೆ. ಅದೇ 200 ರೂಪಾಯಿ ಇದ್ದಿದ್ದರೆ ಏನೇನೋ ತಿನ್ನಬಹುದಿತ್ತಲ್ಲಾ?"   ಎಂದು ಕೈ ಕೈ ಹಿಸುಕಿಕೊಂಡು ಹುಣಿಸೇ ಹಣ್ಣು ತಿಂದ ಮಂಗಣ್ಣನ ಮುಖ ಮಾಡಿಕೊಂಡು ಅಲ್ಲಿಂದ ಹೊರಬಿದ್ದೆ.

Life: The stories Where stories live. Discover now